ಚಿಂಚೋಳಿ

ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲ್ಲೂಕು ; ಆ ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕು ಆ ಜಿಲ್ಲೆಯ ಈಶಾನ್ಯ ತುದಿಯಲ್ಲಿದೆ. ಉತ್ತರದಲ್ಲಿ ಬಿದರೆ ಜಿಲ್ಲೆಯ ಹುಮನಾಬಾದ್ ಮತ್ತು ಬಿದರೆ ತಾಲ್ಲೂಕುಗಳು ಮತ್ತು ಆಂಧ್ರ ಪ್ರದೇಶ. ಪೂರ್ವದಲ್ಲಿ ಆಂಧ್ರ ಪ್ರದೇಶ. ದಕ್ಷಿಣದಲ್ಲಿ ಸೇಡಂ ತಾಲ್ಲೂಕು, ಪಶ್ಚಿಮದಲ್ಲಿ ಚಿತ್ತಾಪುರ ಮತ್ತು ಗುಲ್ಬರ್ಗ ತಾಲ್ಲೂಕುಗಳು-ಇವು ತಾಲ್ಲೂಕಿನ ಮೇರೆಗಳು. ವಿಸ್ತೀರ್ಣ 608.6 ಚ.ಮೈ. (1,576.2 ಚ.ಕಿಮೀ.); ಜನಸಂಖ್ಯೆ 2,23,477 (2001), ತಾಲ್ಲೂಕಿನಲ್ಲಿ ಚಿಂಚೋಳಿ ಪಟ್ಟಣವಲ್ಲದೆ 133 ಗ್ರಾಮಗಳಿವೆ. ಚಿಂಚೋಳಿ, ಐನಾಪುರ, ಕೋಡ್ಲಿ, ಸುಳೇಪೇಟೆ-ಇವು ತಾಲ್ಲೂಕಿನ ಕಂದಾಯ ವಲಯಗಳು.

ಚಿಂಚೋಳಿ ತಾಲ್ಲೂಕು ಸಮುದ್ರಮಟ್ಟದಿಂದ ಸಾಮಾನ್ಯವಾಗಿ 1,000'-2,000' ಎತ್ತರದಲ್ಲಿದೆ. ಸ್ಥೂಲವಾಗಿ ಉತ್ತರದಿಂದ ದಕ್ಷಿಣಕ್ಕೆ ನೆಲ ಇಳಿಜಾರಾಗಿದೆ. ತಾಲ್ಲೂಕಿನ ಮುಖ್ಯ ನದಿ ಮುಲ್ಲಾಮಾರಿ. ಇದು ವಾಯುವ್ಯದಲ್ಲಿ ತಾಲ್ಲೂಕನ್ನು ಪ್ರವೇಶಿಸಿ, ಚಿಂಚೋಳಿ ಪಟ್ಟಣದ ವರೆಗೂ ಸ್ಥೂಲವಾಗಿ ಪೂರ್ವಾಭಿಮುಖವಾಗಿ ಹರಿದು ಅನಂತರ ದಕ್ಷಿಣಕ್ಕೆ ತಿರುಗಿ ಹರಿದು ಕಾಗಿಣಾ ನದಿಯನ್ನು ಸೇರುತ್ತದೆ.

ತಾಲ್ಲೂಕಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಅರಣ್ಯಗಳಿವೆ. 70,087 ಎಕರೆಗಳಷ್ಟು ಅರಣ್ಯ ಪ್ರದೇಶ. ಇಡೀ ಗುಲ್ಬರ್ಗ ಜಿಲ್ಲೆಯ ಅರಣ್ಯದಲ್ಲಿ ಸುಮಾರು ಅರ್ಧಭಾಗ ಇಲ್ಲಿದೆ. ತೇಗ, ಬೀಟೆ, ಕರಿಮತ್ತಿ, ಹುರಗಲು ಮುಖ್ಯ ಮರಗಳು, ಇಲ್ಲಿಯದು ಮುಖ್ಯವಾಗಿ ಪರ್ಣಪಾತಿ ಅರಣ್ಯ. ಲಂಗೂರ್, ಕೋತಿ, ಜಿಂಕೆ, ನರಿಗಳಲ್ಲದೆ ಕೆಲವು ಚಿರತೆಗಳೂ ಕರಡಿಗಳೂ ಇವೆ. ಹಿಂದೆ ಹುಲಿಗಳಿದ್ದುವು. ಈಗ ಅವು ಇಲ್ಲವೇ ಇಲ್ಲವೆನ್ನಬಹುದು. ತೋಳ, ಕಿರುಬ, ಕಾಡುನಾಯಿಗಳೂ ಉಂಟು.
ಗುಲ್ಬರ್ಗ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕಾಗಿದ್ದ ಚಿಂಚೋಳಿ ಈಗ ಪ್ರಗತಿ ಹೊಂದುತ್ತಿದೆ. ಭೂಮಿ ಅಷ್ಟೇನೂ ಫಲವತ್ತಾದ್ದಲ್ಲ. ಇತ್ತೀಚೆಗೆ ಪ್ರಾರಂಭವಾಗಿ ಈಗ ಮುಗಿಯುವ ಹಂತದಲ್ಲಿರುವ ಚಂದ್ರಂಪಳ್ಳ ಜಲಾಶಯಕ್ಕೆ 140 ಲಕ್ಷ ರೂ.ಗಳಿಗಿಂತ ಹೆಚ್ಚು ವೆಚ್ಚ ತಗುಲಿದೆ. ಇದರಿಂದ 12,000 ಎಕರೆಗಳಿಗೂ ಹೆಚ್ಚು ಭೂಮಿಗೆ ಈ ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯ ಒದಗಲಿದೆ.
ತಾಲ್ಲೂಕಿನ ಮುಖ್ಯಸ್ಥಳ ಚಿಂಚೋಳಿ, ಇದು ಮುಲ್ಲಾಮಾರಿ ನದಿಯ ದಡದಲ್ಲಿದೆ. ಜನಸಂಖ್ಯೆ 17,158 (2001). ಗಿರಿಕಾನನ ಕಣಿವೆಗಳಿಂದ ಸುತ್ತುವರಿಯಲ್ಪಟ್ಟ ಚಿಂಚೋಳಿಯದು ರಮ್ಯವಾದ ಸನ್ನಿವೇಶ. ಹಿಂದೆ ಇಡೀ ಚಿಂಚೋಳಿ ತಾಲ್ಲೂಕು ನವಾಬ್ ಅಲಂ ಅಲಿ ಕೈರೋಜನ ಜಹಗೀರಾಗಿತ್ತು. ಚಿಂಚೋಳಿ ಪಟ್ಟಣದಲ್ಲಿ ಪ್ರಸಿದ್ಥವಾದ ದರಗಾ ಒಂದುಂಟು. ರಾಜನ ಅರಮನೆ ಇನ್ನೊಂದು ಪ್ರೇಕ್ಷಣೀಯ ಕಟ್ಟಡ. ರಾಯಿಮಾನ್‍ಘಡ ದೇವಸ್ಥಾನಕ್ಕೆ ಅನೇಕ ಭಕ್ತರು ಬರುತ್ತಾರೆ. ಚಿಂಚೋಳಿಯಲ್ಲಿ ಪ್ರೌಢಶಾಲೆ, ಆಸ್ಪತ್ರೆ ಮತ್ತು ತಾಲ್ಲೂಕು ಕಚೇರಿಗಳಿವೆ. 1953ರವರೆಗೂ ಚಿಂಚೋಳಿ ಪೌರ ಸಮಿತಿ ಅಲ್ಲಿಯ ತಹಸೀಲ್ದಾರರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿತ್ತು. ಆ ವರ್ಷ ಅದಕ್ಕೆ ಪಟ್ಟಣ ಪೌರಸಭೆಯ ಸ್ಥಾನ ಲಭಿಸಿತು. ಪಟ್ಟಣಕ್ಕೆ ಸುರಕ್ಷಿತ ನೀರು ಸರಬರಾಯಿ ವ್ಯವಸ್ಥೆಯುಂಟು.

ಚಿಂಚೋಳಿಯ ಸುತ್ತಮುತ್ತಲೂ ನದೀನಾಲೆಗಳಿರುವುದರಿಂದ ಈಗಿರುವ ಊರಿಗೆ ಹೊಂದಿಕೊಂಡು ನಗರ ವಿಸ್ತರಣೆ ಮಾಡುವುದು ಸಾಧ್ಯವಿರಲಿಲ್ಲ. ಆದ್ದರಿಂದ ಪಕ್ಕದ ಚಂದಾಪುರವನ್ನು ಅಭಿವೃದ್ಧಿ ಪಡಿಸಬೇಕೆಂದು 310 ಎಕರೆ ಜಮೀನನ್ನು ವಶಪಡಿಸಿಕೊಂಡು ಅಲ್ಲಿ ಆಧುನಿಕ ಪಟ್ಟಣದ ಯೋಜನೆ ಹಾಕಲಾಗಿದೆ. ಸುಮಾರು 8,000 ಜನರಿಗೆ ವಸತಿ ಸೌಕರ್ಯ, ಪ್ರೌಢಶಾಲೆ, ಮಾರುಕಟ್ಟೆ, ಆರೋಗ್ಯ ಕೇಂದ್ರ, ಉದ್ಯಾನ, ಆಟದ ಮೈದಾನ, ಬಯಲು ನಾಟ್ಯಮಂದಿರ ಇತ್ಯಾದಿ ಸೌಕರ್ಯಗಳಿಗೆ ಅಲ್ಲಿ ಅವಕಾಶ ಒದಗಿಸಲಾಗಿದೆ. ಹತ್ತಿರದ ಮುಲ್ಲಾಮಾರಿ ನದಿಯಿಂದ ಅಲ್ಲಿಯ ನೀರಿನ ಪೂರೈಕೆಗೆ ಅನುಕೂಲವಿದೆ. ತುಂಗಭದ್ರಾ ಜಲವಿದ್ಯುತ್ತು ಈ ಪ್ರದೇಶಕ್ಕೆ ಸರಬರಾಜಾಗುತ್ತಿದೆ.

	ರಾಜ್ಯದ ಇತರ ಭಾಗಗಳಿಂದ ಚಿಂಚೋಳಿ ತಲುಪಬೇಕಾದರೆ ತಾಂಡೂರು ನಿಲ್ದಾಣಕ್ಕೆ ರೈಲಿನಲ್ಲಿ ಹೋಗಿ ಅಲ್ಲಿಂದ ಬಸ್ ಮೂಲಕ ಹತ್ತೊಂಬತ್ತು ಮೈ. ಪ್ರಯಾಣ ಮಾಡಬೇಕಾಗುತ್ತಿತ್ತು. ಈಗ ಸೇಡಂ ತಾಲ್ಲೂಕಿನಿಂದ ನೇರವಾದ ರಸ್ತೆ ಸಿದ್ಧವಾಗಿದೆ.
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ